ಛಾಂದೋಗ್ಯೋಪನಿಷತ್ತು -
	ಪ್ರಧಾನ ಉಪನಿಷತ್ತುಗಳಲ್ಲಿ ಒಂದು. ಇದು ಅತ್ಯಂತ ಪ್ರಾಚೀನವಾದುದೆಂದು ಪರಿಗಣಿತವಾಗಿದೆ. ಸಾಮವೇದದ ಗೌತಮ ಶಾಖೆಗೆ ಸೇರಿದೆ. ಅರ್ಥಗಾಂಭೀರ್ಯ, ಪ್ರಾಚೀನತೆ, ಬ್ರಹ್ಮಜ್ಞಾನ ಪ್ರತಿಪಾದನೆ-ಈ ದೃಷ್ಟಿಗಳಿಂದ ಬಹಳ ಪ್ರೌಢವೂ ಪ್ರಮೇಯಬಹುಲವೂ ಆಗಿದೆ. ಇದರಲ್ಲಿ ಎಂಟು ಅಧ್ಯಾಯಗಳು, ಒಂದೊಂದು ಅಧ್ಯಾಯದಲ್ಲಿ ಅನೇಕ ಖಂಡಗಳೂ ಇವೆ. ಒಂದೊಂದು ಖಂಡದಲ್ಲೂ ಹಲವಾರು ಗದ್ಯಮಂತ್ರಗಳಿವೆ. ಈ ಖಂಡಗಳು ಬೇರೆಬೇರೆ ವಿಷಯಗಳನ್ನು ವಿವೇಚಿಸುವುದರಿಂದ ಇವು ಬೇರೆ ಬೇರೆ ಕಾಲಕ್ಕೆ ಸೇರಿರಬಹುದೆಂದು ವಿಮರ್ಶಕರ ಅಭಿಪ್ರಾಯ. ಗೃಹಸ್ಥ ಜೀವನವು ಬ್ರಹ್ಮಲೋಕ ಪ್ರಾಪ್ತಿಗೆ ವಿಹಿತಮಾರ್ಗವೆಂದು ಕೊನೆಯ ಖಂಡದಲ್ಲಿ ಹೇಳಿರುವುದರಿಂದ ಯುಗಾದಿಗಳ ಪ್ರಾಧಾನ್ಯ ತಪ್ಪುವುದಕ್ಕೆ ಮುಂಚೆಯೇ ಇದು ಸಂಕಲಿತವಾಗಿರಬೇಕು. ಪಶು ಹಿಂಸೆಯೂ ಅನುಮೋದಿತವಾಗಿದೆ. ಆಚಾರ್ಯ ಪರಂಪರೆಯನ್ನೂ ಸಂಗ್ರಹವಾಗಿ ಕೊಡಲಾಗಿದೆ.

	ಮೊದಲನೆಯ ಅಧ್ಯಾಯದಲ್ಲಿ ಹದಿಮೂರು ಖಂಡಗಳಿವೆ. ಪ್ರಣವ ಸ್ವರೂಪವನ್ನೂ ಸಾಮಗಾನದ ಗೂಢ ಸ್ವರೂಪವನ್ನೂ ತಿಳಿಸುವ ಈ ಅಧ್ಯಾಯದ ಮೊದಲನೆಯ ಖಂಡದಲ್ಲಿ ಉದ್ಗೀಥದ ಅವಯವವಾದ ಓಂಕಾರದ ಉಪಾಸನೆಯನ್ನು ನಿರೂಪಿಸಲಾಗಿದೆ. ಬ್ರಹ್ಮದ ಪ್ರತೀಕವಾದ ಓಂಕಾರ, ವರ್ಣಾತ್ಮಕವೂ ಉದ್ಗೀಥ ಶಬ್ದವಾಚ್ಯವೂ ಆಗಿದ್ದು ಪರಮಾತ್ಮೋಪಾಸನೆಗೆ ಶ್ರೇಷ್ಠ ಸಾಧನವಾಗಿದೆ. ಉದ್ಗಾತೃ ಹಾಡುವ ಓಂಕಾರವೇ ಉದ್ಗೀಥ. 2ನೆಯ ಖಂಡದಲ್ಲಿ ಉದ್ಗೀಥವನ್ನು ಮುಖ್ಯ ಪ್ರಾಣವೆಂದು ಉಪಾಸಿಸಬೇಕೆಂದು ತಿಳಿಸಲಾಗಿದೆ. ಪ್ರಾಣೋಪಾಸಕನನ್ನು ಭೇದಿಸಲು ಯಾರಿಗೂ ಸಾಧ್ಯವಿಲ್ಲ. ಅವನಿಗೆ ಪ್ರಾನಾತ್ಮಭಾವವೆಂಬ ಅದೃಷ್ಟ ಫಲಪ್ರಾಪ್ತಿಯೆಂದು ಹೇಳಲಾಗಿದೆ. 3ನೆಯ ಖಂಡದಲ್ಲಿ ಆದಿತ್ಯ ದೃಷ್ಟಿಯಿಂದ ಉದ್ಗೀಥೋಪಾಸನೆಯನ್ನು ಹೇಳಲಾಗಿದೆ. 3ನೆಯ ಖಂಡದಲ್ಲಿ ಆದಿತ್ಯ ದೃಷ್ಟಿಯಿಂದ ಉದ್ಗೀಥೋಪಾಸನೆಯನ್ನು ಹೇಳಲಾಗಿದೆ. 4ನೆಯ ಖಂಡದಲ್ಲಿ ಅಮೃತವೂ ಅಭಯವೂ ಆಗಿರುವ ಓಂಕಾರೋಪಾಸನೆಯನ್ನು ಮಾಡುವವನು ಅಮೃತನೂ ಅಭಯನೂ ಆಗುವನೆಂದು ತಿಳಿಸಿ ವಾಗಾದಿ ಪ್ರಾಣಗಳನ್ನು ರಶ್ಮಿಗಳನ್ನು ವಿಂಗಡಿಸಿಕೊಂಡು ಉಪಾಸಿಸಿದರೆ ಬಹುಪುತ್ರಲಾಭವಾಗುವುದೆಂದು 5ನೆಯ ಖಂಡದಲ್ಲಿ ತಿಳಿಸಲಾಗಿದೆ. 6ನೆಯ ಖಂಡದಲ್ಲಿ ಸರ್ವಫಲ ಸಂಪತ್ತಿಗಾಗಿ ಉದ್ಗೀಥದ ಉಪಾಸನೆಯನ್ನು, 7ನೆಯ ಖಂಡದಲ್ಲಿ ಆದಿತ್ಯಚಕ್ಷು ಎಂದರೆ ಪುರುಷನ ದೃಷ್ಟಿಯಿಂದ ಓಂಕಾರದ ಉಪಾಸನೆಯನ್ನು ಹೇಳಿ, ಮತ್ತೊಂದು ಉಪಾಸನೆಯನ್ನು ಆಖ್ಯಾಯಿಕಾ ರೂಪದಿಂದ 8-9 ಖಂಡಗಳಲ್ಲಿ ಹೇಳಿದೆ. 10 ಮತ್ತು 11ನೆಯ ಖಂಡಗಳು ಪ್ರಸಾವ, ಪ್ರತಿಹಾರ ಎಂಬ ನಾಮಭಕ್ತಿಗಳ ಉಪಾಸನೆಯನ್ನೂ ಪ್ರಾಣ, ಆದಿತ್ಯ, ಅನ್ನ ಎಂಬ ದೃಷ್ಟಿಗಳಿಂದ ಇದನ್ನು ಹೇಗೆ ಮಾಡಬೇಕೆಂಬುದನ್ನು ಹೇಳಿದೆ. ದೇವತೆಗಳ ರೂಪದಲ್ಲಿರುವ ನಾಯಿಗಳಿಗೆ ಗೋಚರವಾದ ಶಾವ-ಉದ್ಗೀಥಗಳು ಅನ್ನಲಾಭಕ್ಕೋಸ್ಕರ ಉಪಾಸಿಸುವುದನ್ನು 12ನೆಯ ಖಂಡದಲ್ಲಿಯೂ 13ನೆಯ ಖಂಡದಲ್ಲಿ ಸ್ತೋಭಾಕ್ಷರ ವಿಷಯವಾದ ಬೇರೆಬೇರೆ ಉಪಾಸನೆಗಳನ್ನೂ ಒಟ್ಟುಗೂಡಿಸಿಯೂ ಹೇಳಿದೆ.

	2ನೆಯ ಅಧ್ಯಾಯದಲ್ಲಿ ಸಮಸ್ತ ಸಾಮವನ್ನೂ ಅದರ ವಿಷಯವಾದ ಉಪಾಸನೆಗಳನ್ನೂ ಉಪದೇಶಿಸಲಾಗಿದೆ. ವಿಶ್ವೇ ಸಾಮವೆಂದು ಸಾರಿ ಪಂಚವಿಧ ಸಪ್ತವಿಧ ಸಾಮೋಪಾಸನೆಯನ್ನು ಬೋಧಿಸಲಾಗಿದೆ. ಇದರಲ್ಲಿ 24 ಖಂಡಗಳಿವೆ. ಸಮಸ್ತ ಅವಯವಗಳಿಂದ ಕೂಡಿದ ಸಾಮದಲ್ಲಿ ಸಾಧುದೃಷ್ಟಿಯನ್ನು ವಿಧಿಸಿರುವುದು ಮೊದಲ ಖಂಡದ ತಾತ್ಪರ್ಯ, 2ನೆಯ ಖಂಡದಿಂದ 7ನೆಯ ಖಂಡದವರೆಗೂ ಸಾಮದ ಪಂಚಾಶಯವಗಳಿಂದ ಹಿಂಕಾರ, ಪ್ರಸ್ತಾವ, ಉದ್ಗೀಥ, ಪ್ರತಿಹಾರ, ನಿಧನ-ಇವುಗಳನ್ನು ಪೃಥಿವ್ಯಾದಿ ಲೋಕದೃಷ್ಟಿಯಿಂದಲೂ ಪುರೋವಾಕಾದಿ ವೃಷ್ಟಿಯಿಂದಲೂ ಮೇಘವೇ ಮೊದಲಾದ ನೀರಿನ ದೃಷ್ಟಿಯಿಂದಲೂ ವಸಂತಾದಿ ಋತು ದೃಷ್ಟಿಯಿಂದಲೂ ಆಡುಕುರಿ ಮೊದಲಾದ ಪಶುದೃಷ್ಟಿಯಿಂದಲೂ ಪ್ರಾಣದೃಷ್ಟಿಯಿಂದಲೂ ಉಪಾಸಿಸಬೇಕೆಂದು ವಿಧಿಸಲಾಗಿದೆ. ಸಾಮದ ಪಂಚವಿಧಕ್ಕೆ ಆದಿ ಉಪದ್ರವಗಳನ್ನು ಸೇರಿಸಿ ಸಪ್ತವಿಧ ಸಾಮವನ್ನು ವಾಕ್ ದೃಷ್ಟಿಯಿಂದ ಉಪಾಸಿಸಬೇಕೆಂದು 8ನೆಯ ಖಂಡದಲ್ಲಿ ತಿಳಿಸಲಾಗಿದೆ. ಆದಿತ್ಯವನ್ನೇ ಸಮಸ್ತ ಸಾಮದಲ್ಲಿ ಅಭ್ಯಾಸ ಮಾಡಿಕೊಂಡು ಉಪಾಸಿಸಬೇಕೆಂದು 9ನೆಯ ಖಂಡದಲ್ಲಿ ಹೇಳಿ 21 ಅಕ್ಷರಗಳ ಉಪಾಸನೆಯ ಮೂಲಕ ಮೃತ್ಯುವನ್ನು ಪಡೆದು ಅವುಗಳಿಗಿಂತ ಅತಿರಿಕ್ತವಾದ ಅಕ್ಷರದ ಮೂಲಕ ಆದಿತ್ಯರೂಪಿಯಾದ ಮೃತ್ಯುವನ್ನು ಅತಿಕ್ರಮಿಸಬೇಕೆಂದು ತಿಳಿಸಲಾಗಿದೆ. ಇದು 10ನೆಯ ಖಂಡದ ವಿಷಯ. ಮನಸ್ಸು, ವಾಕ್, ಚಕ್ಷು, ಶ್ರೋತ್ರ, ಪ್ರಾಣ-ಇವುಗಳ ದೃಷ್ಟಿಯಿಂದ ಗಾಯತ್ರ ಸಾಮವನ್ನು ಉಪಾಸಿಸಬೇಕೆಂದು 11ನೆಯ ಖಂಡದಲ್ಲಿಯೂ ಮಂಡನಧೂಮ, ಜ್ವಾಲೆ, ಅಂಗಾರ, ಉಪಶಾಂತಿ, ಸಂಶಾಂತಿ ಇವುಗಳ ದೃಷ್ಟಿಯಿಂದ ರಥಂತರ ಸಾಮವನ್ನು ಉಪಾಸಿಸಬೇಕೆಂದು 12ನೆಯ ಖಂಡದಲ್ಲಿಯೂ ಹೇಳಿದೆ. 13ರಲ್ಲಿ ಉಪಮಂತ್ರಣಾದಿಗಳ ದೃಷ್ಟಿಯಿಂದ ವಾಮದೇವ್ಯಸಾಮವನ್ನು ಉಪಾಸಿಸಬೇಕೆಂದು ಹೇಳಿದೆ. ಆದಿತ್ಯಾದಿ ದೃಷ್ಟಿಯಿಂದ, ಅಭ್ರಾದಿ ದೃಷ್ಟಿಯಿಂದ, ವಸಂತಾದಿ ದೃಷ್ಟಿಯಿಂದ, ಪೃಥಿವ್ಯಾದಿ ದೃಷ್ಟಿಯಿಂದ, ಆಡು ಮೊದಲಾದ ದೃಷ್ಟಿಯಿಂದ ಲೋಮ, ಅಗ್ನಿ, ತ್ರಯೀವಿದ್ಯಾ- ಈ ದೃಷ್ಟಿಗಳಿಂದ, ಕ್ರಮವಾಗಿ ಬೃಹತ್ತು, ವೈರೂಪ, ವೈರಾಜ, ಶಕ್ಸರೀ, ರೇವತೀ, ಯಜ್ಞಾಯಜ್ಞ, ರಾಜ, ಸಾಮುಸಮುದಾಯ. ಈ ಸಾಮಗಳ, ಸರ್ವಾತ್ಮಕ ಸಾಮೋಪಾಸನೆಯನ್ನು 14 ರಿಂದ 21 ಖಂಡಗಳವರೆಗೂ ವಿಧಿಸಲಾಗಿದೆ. ಗಾನ ವಿಶೇಷಾದಿ ಸಂಪತ್ತಿಯನ್ನು ಉಪದೇಶಿಸಿರುವುದು 22ನೆಯ ಖಚಿಡದಲ್ಲಿ. 23ರಲ್ಲಿ ಓಂಕಾರೋಪಾಸನೆಯನ್ನು ವಿಧಿಸಿದೆ. ಈ ಅಧ್ಯಾಯದ ಕೊನೆಯ ಖಂಡದಲ್ಲಿ ಪುನಃ ಯಜ್ಞಾಂಗವಾದ ಸಾಮ, ಹೋಮ, ಮಂತ್ರ, ಉತ್ಥಾನ-ಇವುಗಳನ್ನು ಉಪದೇಶಿಸಲಾಗಿದೆ. ಇವೆಲ್ಲ ವಿಶಿಷ್ಟ ಫಲಪ್ರಾಪ್ತಿಗಾಗಿ.

	3ನೆಯ ಅಧ್ಯಾಯದಲ್ಲಿ 19 ಖಂಡಗಳಿವೆ. ಮೊದಲನೆಯ 11 ಖಂಡಗಳಲ್ಲಿ ಮಧುವಿದ್ಯೆಯನ್ನು ನಿರೂಪಿಸಲಾಗಿದೆ. ಆದಿತ್ಯನೇ ದೇವಮಧು, ಅವನೇ ಆತ್ಮವೆಂದು ಸಾರಿ, ಸರ್ವಪ್ರಾಣಿಗಳ ಕರ್ಮಫಲಸ್ವರೂಪನಾದ ಅವನ ಉಪಾಸನೆ ಸರ್ವಪುರುಷಾರ್ಥಗಳಿಗಿಂತಲೂ ಶ್ರೇಷ್ಠತಮ ಫಲವುಳ್ಳದೆಂದು ಹೇಳಿ ಅದನ್ನು ವಿಧಿಸಲಾಗಿದೆ. ಆದಿತ್ಯ ಪ್ರಾಣಿಸಮೂಹಗಳಿಗೆ ಕರ್ಮಫಲಗಳನ್ನು ಅನುಗ್ರಹಿಸಿ ಅವು ಕ್ಷಯಿಸಿದ ಅನಂತರ, ತನ್ನಲ್ಲಿಯೇ ಉಪಹರಿಸಿಕೊಂಡು ತನ್ನ ಸ್ವರೂಪವಾದ ಬ್ರಹ್ಮದಲ್ಲಿ ನಿಲ್ಲುತ್ತಾನೆ. 12-13ನೆಯ ಖಂಡಗಳು ಗಾಯತ್ರೀ, ಬ್ರಹ್ಮೋಪಾಸನೆಯನ್ನು ಒಳಗೊಂಡಿದೆ. ಇದಕ್ಕೆ ಅನೇಕ ಕಾರಣಗಳನ್ನು ಕೊಡಲಾಗಿದೆ. ಪೂರ್ಣವೂ ಅವಿನಾಶಿಯೂ ಆದ ಬ್ರಹ್ಮವನ್ನು ಹೃದಯಾಕಾಶದಲ್ಲಿ ಧ್ಯಾನಿಸಿ ಉಪಾಸಿಸಬೇಕು. 14ನೆಯ ಖಂಡದಲ್ಲಿ ಶಾಂಡಿಲ್ಯವಿದ್ಯೆ ಉಪವರ್ಣಿತವಾಗಿದೆ. ಅತ್ಯಂತ ಅಣು ಪರಿಮಾಣದವನೂ ವಿಭುವೂ ಆಗಿ, ಹೃದಯ ಪುಂಡಲೀಕದಲ್ಲಿರುವ ತನ್ನ ಆತ್ಮನೇ ಬ್ರಹ್ಮ, ಇವನನ್ನೇ ನಾನು ಸೇರುತ್ತೇನೆ-ಎಂದು ಈಶ್ವರಭಾವವನ್ನು ಹೊಂದುವುದೇ ಶಾಂಡಿಲ್ಯನ ಉಪದೇಶ. 15ನೆಯ ಖಂಡದಲ್ಲಿ ವೀರಪುತ್ರನ ದೀರ್ಘಾಯುಷ್ಯಕ್ಕೋಸ್ಕರ ಕೋಶವಿದ್ಯೆಯನ್ನು ಉಪದೇಶಿಸಿ ಪುತ್ರಪೌತ್ರರಿಂದ ಕೂಡಿರುವ ದೀರ್ಘಜೀವನಕ್ಕಾಗಿ ಪುರುಷವಿದ್ಯೆಯನ್ನು 16-17ನೆಯ ಖಂಡಗಳಲ್ಲಿ ನಿರೂಪಿಸಲಾಗಿದೆ. 18, 19ನೆಯ ಖಂಡಗಳಲ್ಲಿ ಸಮಸ್ತ ಬ್ರಹ್ಮದೃಷ್ಟಿಯನ್ನು ಉಪಾಸಿಸುವುದನ್ನು ಮತ್ತು ಬ್ರಹ್ಮದ ಸ್ವರೂಪವನ್ನು ತಿಳಿಸಿದೆ.

	4ನೆಯ ಅಧ್ಯಾಯದಲ್ಲಿ 17 ಖಂಡಗಳಿವೆ. ಮೊದಲ ಜಾನುಶ್ರುತಿ ಪೌತ್ರಾರ್ಯ ರಾಜನು ರೈಕ್ವನೆಂಬ ಗಾಡಿಯವನು ಬ್ರಹ್ಮಯಜ್ಞನೆಂದು ಕೇಳಿ, ಅವನಲ್ಲಿಗೆ ಹೋಗಿ, ಶ್ರದ್ಧೆ, ಅನ್ನದಾನ, ವಿನಯ-ಇವೇ ಜ್ಞಾನಕ್ಕೆ ಸಾಧನಗಳೆಂದು ಅವನಿಂದ ಅರಿತು, ಸಂವರ್ಗ ವಿದ್ಯೆಯ ಉಪದೇಶವನ್ನು ಪಡೆದ ಪ್ರಸಂಗವಿದೆ. 4ನೆಯ ಖಂಡದಲ್ಲಿ ಜಗತ್ತನ್ನು ಕಾರಣರೂಪದಿಂದ ಏಕವೆಂದು ಭಾವಿಸಿ, ಬ್ರಹ್ಮದೃಷ್ಟಿಯನ್ನು ಪಡೆಯುವ ಷೋಡಶಕಲ ವಿದ್ಯೆಯ ನಿರೂಪಣೆ ಇದೆ. ಸತ್ಯಕಾಮ ಜಾಬಾಲನು ಈ ವಿದ್ಯೆಯನ್ನು ಹಾರಿದ್ರುಮತನೆಂಬ ಆಚಾರ್ಯನಿಂದ ಪಡೆದನೆಂದು 9ನೆಯ ಖಂಡವು ತಿಳಿಸುತ್ತದೆ. 10ನೆಯ ಖಂಡದಿಂದ ಉಪಕೋಸಲ ಕಾಮಲಾಯನು ಸತ್ಯಕಾಮ ಜಾಬಾಲನಲ್ಲಿ ಬ್ರಹ್ಮಚರ್ಯದಿಂದ ಇದ್ದು ಅವನಿಂದ ಉಪದೇಶ ಪಡೆದ ವಿಷಯವಿದೆ. ಕೊನೆಯ ಎರಡು ಖಂಡಗಳಲ್ಲಿ ಕೆಲವು ಯಜ್ಞ ಧರ್ಮಗಳನ್ನು ಯಜ್ಞಫಲ ಪ್ರಾಪ್ತಿಯ ಮಾರ್ಗಗಳನ್ನು ನಿರ್ದೇಶಿಸಲಾಗಿದೆ.

	5ನೆಯ ಅಧ್ಯಾಯದಲ್ಲಿ 1-2 ಖಂಡಗಳಲ್ಲಿ ಪ್ರಾಣೋಪಾಸನೆಯನ್ನೂ ಶ್ರೀಮಂತ ಕರ್ಮಗಳನ್ನೂ ವಿಧಿಸಲಾಗಿದೆ. 3ನೆಯ ಖಂಡದಿಂದ ಪಂಚಾಗ್ನಿ ವಿದ್ಯೆಯ ನಿರೂಪಣೆ ಇದೆ. ಶ್ವೇತಕೇತುವಿನ ತಂದೆಯಾದ ಗೌತಮನಿಗೆ ಪ್ರವಾಹನ ರಾಜನು ಈ ವಿದ್ಯೆಯನ್ನು ಉಪದೇಶಿಸುತ್ತಾನೆ. 11ನೆಯ ಖಂಡದಿಂದ ವೈಶ್ವಾನರ ವಿದ್ಯೆಯ ನಿರೂಪಣೆ ಪ್ರಾರಂಭವಾಗಿದೆ. ಐದು ಜನ ಶ್ರೊತ್ರೀಯರು ಉದ್ದಾಲಕ ಆರುಣಿಯೊಂದಿಗೆ, ವೈಶ್ವಾನರಾತ್ಮವನ್ನು ಅರಿತುಕೊಳ್ಳಲು ಅಶ್ವಪತಿ ಕೈಕಯನ ಬಳಿಗೆ ಬಂದು ಪೂರ್ಣಾತ್ಮನ ಜ್ಞಾನವನ್ನು ಪಡೆದ ವೃತ್ತಾಂತದೊಂದಿಗೆ ಈ ಅಧ್ಯಾಯ ಮುಗಿದಿದೆ.

	ತತ್ತ್ವೋಪದೇಶವೇ ಪ್ರಧಾನವಾಗಿರುವ 6ನೆಯ ಅಧ್ಯಾಯ ಈ ಉಪನಿಷತ್ತಿನಲ್ಲಿ ಅತಿ ಮುಖ್ಯವಾದುದು. ಇದರಲ್ಲಿ 16 ಖಂಡಗಳಿವೆ. ಉದ್ದಾಲಕ ಆರುಣಿಯು ತನ್ನ ಮಗನಾದ ಶ್ವೇತಕೇತುವಿಗೆ ಆತ್ಮವಿದ್ಯೆಯನ್ನು ಬೋಧಿಸುತ್ತಾನೆ. ದೃಷ್ಟಾಂತಗಳಿಂದ ಕಾರ್ಯಕಾರಣಗಳ ಅಭೇದವನ್ನು ತಿಳಿಸುತ್ತಾನೆ. ಒಂದನ್ನು ಅರಿತರೆ ಮತ್ತೊಂದನ್ನು ಅರಿತಂತೆಯೇ, ಸದ್ವಸ್ತುವೇ ಭೂತಗಳಲ್ಲಿ (ತೇಜಸ್ಸು, ನೀರು, ಪೃಥ್ವಿ) ಜೀವರೂಪದಿಂದ ಪ್ರವೇಶಿಸಿ ನಾಮರೂಪಗಳನ್ನು ವಿಂಗಡಿಸಿರುವುದರಿಂದ ಅವು ಭಿನ್ನವಾದ ಅಸ್ತಿತ್ವವನ್ನು ಹೊಂದಿಲ್ಲ. ತೇಜ, ಅಪ್ಪು, ಅನ್ನಾದಿಗಳು ಶರೀರೇಂದ್ರಿಯ ಸಂಘಾತವನ್ನು ಸೇರಿ ಹೇಗೆ ಅಧ್ಯಾತ್ಮಿಕ ತ್ರಿವೃತ್ಕರಣವಾಶಗುವುದೆಂದು ತಂದೆ ಮಗನಿಗೆ ಉಪದೇಶಿಸುತ್ತಾನೆ. ಮನಸ್ಸು ಸುಷುಪ್ತಿಯಲ್ಲಿ ಉಪರತಿಯನ್ನು ಹೊಂದಿದಾಗ ಜೀವನು ಪರಮಾತ್ಮ ಸ್ವರೂಪವನ್ನು ಪಡೆದುಕೊಳ್ಳುತ್ತಾನೆ. ಜಗತ್ತೆಲ್ಲವೂ ಆತ್ಮವಂತವಾಗಿದೆ. ಅದೇ ಸತ್ಯ, ಅದೇ ಆತ್ಮ, ಅದೇ ನೀನಾಗಿರುವೆ ಓ ಶ್ವೇತುಕೇತು! ಎಂದು ಉಪದೇಶಿಸುತ್ತಾನೆ. ಇದೇ ವಿಶ್ವವಿಖ್ಯಾತವಾದ ತತ್ತ್ವಮಸಿ ಮಂತ್ರದ ಉಪದೇಶ. ಶ್ವೇತಕೇತುವಿನ ಒಂದೊಂದು ಸಂದೇಹವನ್ನೂ ದೃಷ್ಟಾಂತಗಳಿಂದ ಪರಿಹರಿಸುತ್ತಾನೆ. 15ನೆಯ ಖಂಡದಲ್ಲಿ ಮುಮುಕ್ಷುವು ಸದ್ವಸ್ತುವಿನಲ್ಲಿ ಸೇರುವ ಕ್ರಮವನ್ನು ತಿಳಿಸುತ್ತಾನೆ. ಅಜ್ಞಾನಿ ಸದ್ವಸ್ತುವನ್ನರಿತುಕೊಳ್ಳದೆ ಪುನಃ ಹಿಂತಿರುಗುತ್ತಾನೆ. ಇದನ್ನು ದೃಷ್ಟಾಂತದಿಂದ ತಿಳಿಸಿ, ಕರ್ತೃತ್ವ ಬೋಕ್ತøತ್ವಗಳಲ್ಲಿ ಅಧಿಕಾರಿ ತಾನು ಎಂಬ ಜೀವಾತ್ಮ ವಿಜ್ಞಾನವನ್ನು ಹೋಗಲಾಡಿಸುವ ತತ್-ತ್ವಮ್-ಅಸಿ ಎಂಬ ವಾಕ್ಯದ ತಾತ್ಪರ್ಯವನ್ನು ಅರಿತು ಶ್ವೇತಕೇತು ಕೃತಾರ್ಥವಾಗುವಂತೆ ಮಾಡುತ್ತಾನೆ. ಶ್ರೀ ರಾಮಾನುಜರು ವ್ಯಾಖ್ಯಾನ ಮಾಡುತ್ತ, ಛಾಂದೋಗ್ಯ ಉಪನಿಷತ್ತು ಪ್ರಾರಂಭದಲ್ಲಿ ಸತ್ಯ ಏಕಮೇವಾದ್ವಿತೀಯವಾಗಿತ್ತು ಎಂದು ಹೇಳಿ ಅಗ್ನಿಯನ್ನು ಹೊರಡಿಸಿತು ಎಂದು ಮುಕ್ತಾಯ ಮಾಡಿರುವುದು ಸತ್ಯ ಎಂಬ ಏಕ ತತ್ತ್ವ ಜಗತ್ತಿನ ಉಪಾದಾನ ಮತ್ತು ನಿಮಿತ್ತ ಕಾರಣ ಎಂದು ಸಾರುತ್ತದೆ ಎಂದು ಸಿದ್ಧಾಂತ ಮಾಡುತ್ತಾರೆ. ಅದು ಯೋಚಿಸಿತು ಎಂಬ ಮಾತುಗಳು ಅಸತ್ಯವೇ ಪ್ರಪಂಚದ ಸಮಸ್ತ ದ್ರವ್ಯ ಮತ್ತು ಕಾರಣ ಎಂದು ಸಿದ್ಧಾಂತಪಡಿಸುತ್ತದೆ ಎಂದು ಹೇಳಿದ್ದಾರೆ. ದ್ವೈತಸಿದ್ದಾಂತದಲ್ಲಿ ತತ್ತ್ವಮಸಿ ವಾಕ್ಯದ ಜೀವಾತ್ಮ ಪರಮಾತ್ಮಗಳ ಅಭಿನ್ನತೆಯನ್ನು ಖಂಡಿಸಲಾಗಿದೆ. ಉಪನಿಷದ್ವಾಕ್ಯವನ್ನು ಅತತ್ತ್ವಮಸಿ ಎಂದು ಬಿಡಿಸಿಕೊಂಡು ದ್ವೈತತ್ತ್ವ ವ್ಯಾಖ್ಯಾನ ಮಾಡುತ್ತದೆ.

	ಶಾಖೆಯನ್ನು ನೆಪ ಮಾಡಿಕೊಂಡು ಚಂದ್ರನನ್ನು ನಿರ್ದೇಶಿಸುವಂತೆ ನಾಮಾದಿ ತತ್ತ್ವಗಳನ್ನು ನೆಪ ಮಾಡಿಕೊಂಡು ಭೂಮ ಎಂಬ ಹೆಸರಿನ ನಿರತಿಶಯ ತತ್ತ್ವವನ್ನು ಉಪದೇಶಿಸಲು 7ನೆಯ ಅಧ್ಯಾಯ ಪ್ರಾರಂಭಿಸುತ್ತದೆ. ಏಕೆಂದರೆ ಸದ್ವಸ್ತುವಿಗಿಂತ ಈಚೆಯಿರುವ ತತ್ತ್ವಗಳನ್ನು ನಿರ್ದೇಶಿಸದೆ ಇದ್ದರೆ ಇನ್ನೂ ಯಾವುದೋ ಒಂದು ತತ್ತ್ವ ಅವಿಜ್ಞಾತವಾಗಿರಬಹುದೆಂಬ ಸಂದೇಹಕ್ಕೆ ಎಡೆ ಇದೆ. ನಾರದ ಸನತ್ಕುಮಾರರ ಆಖ್ಯಾಯಿಕೆ ಪರವಿದ್ಯೆಯ ಸ್ತುತಿಗಾಗಿ ಬಂದಿದೆ. ನಾರದ ಕಲಿತಿದ್ದೆಲ್ಲ ಕೇವಲ ನಾಮವೆಂದು ನಾಮವನ್ನೇ ಬ್ರಹ್ಮನೆಂದು ಉಪಾಸಿಸಬೇಕೆಂದೂ ಸನತ್ಕುಮಾರ ಹೇಳುತ್ತಾನೆ. ನಾಮಕ್ಕಿಂತ ವಾಕ್ಕು ಅಧಿಕವಾದುದು. ಹೀಗೆಯೇ ಮನಸ್ಸು, ಸಂಕಲ್ಪ, ಚಿತ್ತ, ಧ್ಯಾನ, ವಿಜ್ಞಾನ, ಅನ್ನ, ನೀರು, ತೇಜಸ್ಸು, ಆಕಾಶ, ಸ್ಮøತಿ, ಆಸೆ, ಪ್ರಾಣ - ಇವು ಒಂದಕ್ಕಿಂತ ಒಂದು ಅಧಿಕವಾದುವೆಂದೂ ಪ್ರತಿಯೊಂದನ್ನೂ ಬ್ರಹ್ಮವೆಂದು ಉಪಾಸಿಸಬೇಕೆಂದೂ ಉಪದೇಶಿಸುತ್ತಾನೆ. ಎಲ್ಲಿ ಬೇರೊಂದನ್ನು ನೊಡುವುದಿಲ್ಲವೋ ಬೇರೊಂದನ್ನು ಕೇಳುವುದಿಲ್ಲವೋ ಬೇರೆ ಒಂದನ್ನು ಅರಿಯುವುದಿಲ್ಲವೋ ಅದೇ ಭೂಮ ಎಂದು ಹೇಳಿ ಅದು ಮೇಲೆ ಕೆಳಗೆ ಎಲ್ಲೆಲ್ಲಿಯೂ ಇದ್ದು, ಎಲ್ಲದರಲ್ಲಿಯೂ ನಾಮ ಎಂದು ಕರೆಯಿಸಿಕೊಳ್ಳತಕ್ಕದ್ದು, ಇದಕ್ಕಿಂತ ಬೇರೆಯಾಗಿ ಅರಿತುಕೊಳ್ಳುವವರು ಕ್ಷರವಾದ ಲೋಕಗಳಲ್ಲಿ ವಾಸಿಸುತ್ತಾರೆ. ಎಂದು 25ನೆಯ ಖಂಡದಲ್ಲಿ ಹೇಳಿ ಮುಗಿಸುತ್ತಾನೆ. ಪ್ರಾಣದಿಂದ ಪ್ರಾರಂಭಿಸಿ ನಾಮದವರೆಗೆ ಇರುವ ವಸ್ತುಗಳ ಉತ್ಪತ್ತಿ ಪ್ರಳಯಗಳು ಆತ್ಮನಿಂದಲೇ ಉಂಟಾಗುತ್ತವೆ ಎಂದು ಅರಿತ ಜ್ಞಾನಿಗೆ ಸಮಸ್ತ ವ್ಯವಹಾರವೂ ತನ್ನ ಆತ್ಮನಿಂದಲೇ ಉಂಟಾಗುತ್ತಿರುವುದು, ಅವನಿಗೆ ಮೃತ್ಯು, ರೋಗ, ದುಃಖ ಇತ್ಯಾದಿ ಅನರ್ಥಗಳಿಲ್ಲ. ಅವನು ಎಲ್ಲವೂ ಆಗಿ ಎಲ್ಲವನ್ನು ಪಡೆದುಕೊಳ್ಳುತ್ತಾನೆ. ಆಹಾರ ಶುದ್ಧಿಯಿಂದ ರಾಗದ್ವೇಷಮೋಹಗಳೆಂಬ ದೋಷವಿಲ್ಲದೆ ವಿಷಯವಿಜ್ಞಾನದಿಂದ ಅಂತಃಕರಣ ಶುದ್ಧಿಯನ್ನು ಪಡೆದಾಗ ಭೂಮಾತ್ಮನಲ್ಲಿ ಧ್ರುವವಾದ ಸ್ಮøತಿಯುಂಟಾಗುತ್ತದೆ. ಪಾರಮಾರ್ಥಿಕ ಅದ್ವಯಭಾವವನ್ನು ಪಡೆದು ವಿಮುಕ್ತನಾಗುತ್ತಾನೆ ಎಂದು ನಾರದನಿಗೆ ಉಪದೇಶಿಸಲಾಗಿದೆ.

	8ನೆಯ ಅಧ್ಯಾಯದಲ್ಲಿ ಒಟ್ಟು 15 ಖಂಡಗಳಿವೆ. ಮೊದಲನೆಯ ಖಂಡದಲ್ಲಿ ದಹರ ವಿದ್ಯೆಯನ್ನು ಉಪದೇಶಿಲಾಗಿದೆ. ಬ್ರಹ್ಮಪುರವಾದ ನಮ್ಮ ಶರೀರದಲ್ಲಿ ದಹರ ಎಂದರೆ ಸಣ್ಣದಾದ ಹೃದಯಪದ್ಮವೆಂಬ ಒಂದು ಮನೆಯಿದೆ. ಇದರ ಸೂಕ್ಷ್ಮ ಆಕಾಶದಲ್ಲಿ ಅಶರೀರವೂ ಸೂಕ್ಷ್ಮವೂ ಸರ್ವಗತವೂ ಆಗಿರುವ ಬ್ರಹ್ಮ ಇದೆ. ಇಲ್ಲಿ ದ್ಯುಲೋಕ ಪೃಥ್ವಿಗಳು ಅಗ್ನಿವಾಯುಗಳು ಸೂರ್ಯಚಂದ್ರರು ಮತ್ತು ಏನೇನಿರುವುದೋ ಏನೇನಿಲ್ಲವೋ ಅವೆಲ್ಲವೂ ಅಂತರ್ಗತವಾಗಿದೆ. ಈ ಬ್ರಹ್ಮಕ್ಕೆ ಹುಟ್ಟಿಲ್ಲ, ಸಾವಿಲ್ಲ. ಸತ್ಯಕಾಮನೂ ಸತ್ಯಸಂಕಲ್ಪನೂ ಆದ ಆತ್ಮನನ್ನು ಯಾರು ಇಲ್ಲಿ ಉಪಾಸಿಸಿ ದೇಹತ್ಯಾಗ ಮಾಡುವರೊ ಅವರು ಸರ್ವಲೋಕಗಳಲ್ಲಿಯೂ ಸ್ವತಂತ್ರಗತಿಯನ್ನು ಪಡೆಯುತ್ತಾರೆ. ಎರಡನೆಯ ಖಂಡದಲ್ಲಿ ಇಂಥ ಉಪಾಸಕನು ಪಿತೃಲೋಕವೇ ಮೊದಲಾದ ಸಮಸ್ತ ಲೋಕಗಳಲ್ಲಿಯೂ ಆಯಾ ಲೋಕಗಳ ಭೋಗದಿಂದ ಸಂಪನ್ನನಾಗಿ ಮಹಿಮೆಯನ್ನು ಅನುಭವಿಸುತ್ತಾನೆ. ಪ್ರತಿ ರಾತ್ರಿಯೂ ಸುಷುಪ್ತಿ ಕಾಲದಲ್ಲಿ ದಹರಾಕಾಶವೆಂಬ ಸ್ವರ್ಗಲೋಕಕ್ಕೇ ತೆರಳಿ ಸದ್ವಸ್ತುವಿನೊಂದಿಗೆ ಪರಮಾತ್ಮ ಲಕ್ಷಣವಾದ ಜ್ಯೋತಿಯನ್ನು ಸೇರಿ ಸ್ವಸ್ವರೂಪದಲ್ಲಿ ಅಮೃತ, ಅಭಯ, ಬ್ರಹ್ಮವಾಗಿ ನಿಲ್ಲುತ್ತಾನೆಂದು ಮೂರನೆಯ ಖಂಡ ತಿಳಿಸುತ್ತದೆ. ಬ್ರಹ್ಮಲೋಕಕ್ಕೆ ಆತ್ಮನು ಸೇತುವಾಗಿದ್ದಾನೆ. ಅದನ್ನು ದಾಟಿದರೆ ತಮೋರೂಪವಾದ ರಾತ್ರಿಯೂ ಚೈತನ್ಯ ಜ್ಯೋತಿಯಾಗುತ್ತವೆ. ಬ್ರಹ್ಮಲೋಕವನ್ನು ಬ್ರಹ್ಮಚರ್ಯದಿಂದಲೇ ಪಡೆಯಬೇಕು. ಇದು ನಾಲ್ಕನೆಯ ಖಂಡದ ವಿಷಯ. ಬ್ರಹ್ಮಚರ್ಯ ಕರ್ತವ್ಯವನ್ನು ಯಜ್ಞಾದಿಗಳ ಮೂಲಕ ಹೊಗಳಿ ಇಷ್ಟ. ಸತ್‍ಪಾರಾಯಣ, ಮೌನ, ಉಪವಾಸ, ಅರಣ್ಯವಾಸ-ಇವೆಲ್ಲವೂ ಬ್ರಹ್ಮಚರ್ಯವೆನ್ನಿಸಿಕೊಂಡು ಆತ್ಮಲಾಭಕ್ಕೆ ಸಾಧನಗಳೆಂದು 5ನೆಯ ಖಂಡದಲ್ಲಿ ಹೇಳಲಾಗಿದೆ. 6ನೆಯದಾದ ನಾಡೀಖಂಡದಲ್ಲಿ ಜೀವನು ಸುಷುಪ್ತಿ ಕಾಲದಲ್ಲಿ ನಾಡಿಗಳಲ್ಲಿ ಪ್ರವೇಶಿಸಿ ಹೃದಯಾಕಾಶವನ್ನು ಪ್ರವೇಶಿಸುವನೆಂದೂ ಮರಣ ಕಾಲದಲ್ಲಿ ಸದ್ವಸ್ತುವಿನಿಂದ ಸಂಪನ್ನವಾದ ಉಪಾಸಕ ಓಂಕಾರದಿಂದ ಆತ್ಮವನ್ನು ಧ್ಯಾನಿಸುತ್ತ ಸುಷುಮ್ನಾ ನಾಡಿಯ ಮೂಲಕ ನೆತ್ತಿಯನ್ನು ಭೇದಿಸಿಕೊಂಡು ಆದಿತ್ಯನ ಮೂಲಕ ಬ್ರಹ್ಮಲೋಕವನ್ನು ಸೇರುತ್ತಾನೆಂದು ಹೇಳಲಾಗಿದೆ.

	ಪ್ರಜಾಪತಿಯಿಂದ ಇಂದ್ರ ಆತ್ಮಜ್ಞಾನವನ್ನು ಪಡೆದ ವಿಷಯವನ್ನು 12ನೆಯ ಖಂಡದವರೆಗೂ ಹೇಳಿದೆ. ಅವನೊಂದಿಗೆ ಬಂದ ವಿರೋಚನ ಬಿಂಬದಿಂದ ಶರೀರವನ್ನೇ ಆತ್ಮನೆಂದು ತಿಳಿದು, ಉಪದೇಶವನ್ನು ಅರ್ಥಮಾಡಿಕೊಳ್ಳದೆ ಶರೀರಾತ್ಮ ವಾದವನ್ನು ಪ್ರಚಾರಮಾಡಿ ಅಸುರರನ್ನು ಸೇರಿದ. ಇಂದ್ರ ಆಚಾರ್ಯವಚನವನ್ನೇ ಧ್ಯಾನಿಸುತ್ತ ಸಂದೇಹದಿಂದ ಪುನಃ ಪುನಃ ಬಂದು ಒಟ್ಟು ನೂರೊಂದು ವರ್ಷಗಳ ಕಾಲ ಬ್ರಹ್ಮಚರ್ಯದಿಂದ ಪ್ರಜಾಪತಿಯಲ್ಲಿದ್ದು ಅವಸ್ಥಾತ್ರಯ ದೋಷದ ಸಂಬಂಧವಿಲ್ಲದ ಮತ್ತು ಅಪಹತ ಪಾಪ್ಮತ್ಯಾದಿ ಲಕ್ಷಣವುಳ್ಳ ಆತ್ಮನ ಸ್ವರೂಪದ ಉಪದೇಶವನ್ನು ಪಡೆದ. ದೇಹಾಭಿಮಾನದಿಂದ ಬಿಡುಗಡೆ ಹೊಂದಿದವ ಅಶರೀರ. ಉತ್ತಮ ಪುರುಷ. ವಿಶೇಷ ಜ್ಞಾನ ಚಕ್ಷುಸ್ಸೇ ಮೊದಲಾದ ಇಂದ್ರಿಯಗಳಿಂದ ಉಂಟಾಗುತ್ತಿದ್ದರೂ ಚೈತನ್ಯ ಸ್ವರೂಪವೂ ಆತ್ಮನದೇ ಎಂದು ತಿಳಿದ ಮುಕ್ತನು ಸರ್ವಾತ್ಮಭಾವವನ್ನು ಹೊಂದಿ ಸರ್ವಕಾಮಗಳನ್ನೂ ಪಡೆಯುತ್ತಾನೆ ಎಂದು ಉಪದೇಶಿಸಲಾಗಿದೆ. ಮುಂದಿನ ಖಂಡದಲ್ಲಿ ಶ್ಯಾಮಾಚ್ಛಬಲಂ ಪ್ರಪದ್ಯೇ ಎಂಬ ಪವಿತ್ರ ಮಂತ್ರವನ್ನು ಧ್ಯಾನಕ್ಕಾಗಿ ಹೇಳಿದೆ. ನಾಮರೂಪಗಳು ಯಾವುದರಲ್ಲಿ ಇವೆಯೋ ಅದು ಬ್ರಹ್ಮ, ಅಮೃತ, ಆತ್ಮ ಎಂದು 14ನೆಯ ಖಂಡದಲ್ಲಿ ಹೇಳಿದೆ. ಈ ಆತ್ಮಜ್ಞಾನವನ್ನು ಬ್ರಹ್ಮ ಪ್ರಜಾಪತಿಗೆ ಹೇಳಿದನೆಂದೂ ಅವನು ಮನುವಿಗೂ ಮನು ಮಾನವರಿಗೂ ಉಪದೇಶಿಸಿದನೆಂದು ಕೊನೆಯ ಖಂಡದಲ್ಲಿ ಹೇಳಿದೆ. ಯಜ್ಞಾದಿ ಕರ್ಮಗಳಿಗೂ ಫಲವಿದೆಯೆಂದೂ ಜ್ಞಾನಿಗಳು ಮಾಡುವ ಕರ್ಮಕ್ಕೂ ವಿಶಿಷ್ಟ ಫಲವಿದೆಯೆಂದೂ ಈ ಉಪನಿಷತ್ತು ಒಪ್ಪುತ್ತದೆ.
(ಎಸ್.ಎಸ್.ಆರ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ